ತಿಪಟೂರು
	ತುಮಕೂರು ಜಿಲ್ಲೆಯ ಒಂದು ತಾಲ್ಲೂಕು ; ಉಪವಿಭಾಗ; ತಾಲ್ಲೂಕಿನ ಮತ್ತು ಉಪವಿಭಾಗದ ಕೇಂದ್ರ.  ಪಶ್ಚಿಮದಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳೂ ಪೂರ್ವದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ. ಗುಬ್ಬಿ ಮತ್ತು ತುರುವೇಕೆರೆ ತಾಲ್ಲೂಕುಗಳೂ ತಿಪಟೂರು ತಾಲ್ಲೂಕನ್ನು ಸುತ್ತುವರಿದಿವೆ.  ತಾಲ್ಲೂಕಿನ ವಿಸ್ತೀರ್ಣ 830.1 ಚ.ಕಿ.ಮೀ. (320.5 ಚ. ಮೈ.) ; ಜನಸಂಖ್ಯೆ 2,16,826 (2001). ತಿಪಟೂರು, ಕಿಬ್ಬನಹಳ್ಳಿ, ನೊಣವಿನಕೆರೆ, ಹೊನ್ನವಳ್ಳಿ- ಇವು ಈ ತಾಲ್ಲೂಕಿನ ಹೋಬಳಿಗಳು, ತಾಲ್ಲೂಕಿನಲ್ಲಿ ತಿಪಟೂರು ನಗರ ಮತ್ತು 216 ಗ್ರಾಮಗಳೂ ಇವೆ.

	ತಿಪಟೂರು ತಾಲ್ಲೂಕಿನಲ್ಲಿ ಒಟ್ಟಿನಲ್ಲಿ ಅಲೆಯಲೆಯಾಗಿ ಏರಿಳಿಯುವ ಪ್ರಸ್ಥಭೂಮಿ ಪ್ರದೇಶ.  ಆದರೆ ಉತ್ತರಲ್ಲಿ ಬಂಡೆಗಳಿಂದ ಕೂಡಿದ ಬೋಳು ಕೋಡುಗಳ ಬೆಟ್ಟಗಳಿವೆ.  ಕೃಷ್ಣಾ ಮತ್ತು ಕಾವೇರಿ ನದೀ ವ್ಯವಸ್ಥೆಗಳನ್ನು ಬೇರ್ಪಡಿಸುವ ಜಲವಿಭಾಗ ರೇಖೆ ಈ ತಾಲ್ಲೂಕಿನ ಮೂಲಕ ಪೂರ್ವಪಶ್ಚಿಮವಾಗಿ ಸಾಗುತ್ತದೆ.  ತಾಲ್ಲೂಕಿನ ಉನ್ನತ ಶಿಖರಗಳು ಎರಡು.  ಬೊಮ್ಮನಹÀಳ್ಳಿ ಶಿಖರದ ಎತ್ತರ ಸಮುದ್ರಮಟ್ಟದಿಂದ 3,125 ಅಡಿ; ಚೌಡನಹಳ್ಳಿ ಶಿಖರದ ಎತ್ತರ 2,665 ಅಡಿ.  ತಾಲ್ಲೂಕಿನ ಉಲ್ಲೇಖಾರ್ಹವಾದ ನದಿಗಳಾಗಲಿ ಹೊಳೆಗಳಾಗಲಿ ಇಲ್ಲ.  ಆದರೆ ಕೆರೆಗಳ ನಿರ್ಮಾಣಕ್ಕೆ ಇಲ್ಲಿಯ ನೆಲ ಬಹಳ ಅನುಕೂಲವಾಗಿದೆ.  ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 615.2 ಮಿ.ಮೀ.  ಇಲ್ಲಿಯ ನೈಸರ್ಗಿಕ ಸಸ್ಯ ಸಂಪತ್ತು ಬಹಳ ಅಲ್ಪ.  ಕುರುಚಲು ಕಾಡುಗಳು ಅಲ್ಲಲ್ಲಿ ಇವೆ.  ತಾಲ್ಲೂಕಿನಲ್ಲಿ ಕಪ್ಪು.  ಕಂದು ಮತ್ತು ಕೆಂಪು ಮಣ್ಣುಗಳಿವೆ.  ಕಪ್ಪು ಮಣ್ಣಿನ ನೆಲ ಬಲು ಕಡಿಮೆ.  ಅದಕ್ಕೆ ವ್ಯವಸಾಯದ ದೃಷ್ಟಿಯಿಂದ ಅಷ್ಟೇನೂ ಪ್ರಾಮುಖ್ಯವಿಲ್ಲ.  ಮರಳು  ಮಿಶ್ರಿತ ಕೆಂಪು ಮಣ್ಣು ನೆಲವೇ ಸಾಮಾನ್ಯ. ತಾಲ್ಲೂಕಿನ ಉತ್ತರ ಭಾಗದ ಮಣ್ಣು ಅಷ್ಟೇನೂ ಫಲವತ್ತಾದ್ದಲ್ಲ. ಅದರಲ್ಲಿ ನೊರಜುಗಲ್ಲು ಮಿಶ್ರವಾಗಿದೆ.  ತಾಲ್ಲೂಕಿನ ಮಧ್ಯ ಮತ್ತು ದಕ್ಷಿಣ ಭಾಗಗಳ ಎತ್ತರದ ಪ್ರದೇಶಗಳಲ್ಲಿ ಕೆಂಪು ಮಣ್ಣೂ ತಗ್ಗಿನ ಪ್ರದೇಶಗಳಲ್ಲಿ ಕಪ್ಪು ಕಂದು ಮಣ್ಣೂ ಇವೆ.  ಒಟ್ಟಿನಲ್ಲಿ ತಾಲ್ಲೂಕಿನಲ್ಲಿ 1,00,060 ಎಕರೆ ನೆಲ ಕೆಂಪು ಮಣ್ಣಿನಿಂದ ಕೂಡಿದ್ದು.  25,000 ಎಕರೆಗಳಲ್ಲಿ ದಪ್ಪ ಮರಳು ಮತ್ತು ಸಣ್ಣ ಕಲ್ಲುಮಿಶ್ರಿತ ಮಣ್ಣಿದೆ.  2,500 ಎಕರೆ ಕಪ್ಪು ಮಣ್ಣಿನ ನೆಲ, 39,500 ಎಕರೆಗಳಲ್ಲಿ ಮರಳು ಮಿಶ್ರಿತ ಜೇಡಿ ಮಣ್ಣಿದೆ.  22,000 ಎಕರೆ ನೆಲ ಜೇಡಿ ಮಣ್ಣಿನದು. 

	ತಾಲ್ಲೂಕಿನ ಒಟ್ಟು ನೆಲದಲ್ಲಿ 1965-66ರಲ್ಲಿ 1,10,562 ಎಕರೆ ಪ್ರದೇಶ ಸಾಗುವಳಿಗೆ ಒಳಪಟ್ಟಿತ್ತು.  1,470 ಎಕರೆ  ಅರಣ್ಯಪ್ರದೇಶ, 30,178 ಎಕರೆ ಹುಲ್ಲುಗಾವಲು ಮತ್ತು 3,320 ಎಕರೆ ವ್ಯವಸಾಯಯೋಗ್ಯ ಬೀಳು ನೆಲ.  ನೀರಾವರಿ ಸೌಲಭ್ಯ ಪಡೆದ ಜಮೀನಿನ ವಿಸ್ತೀರ್ಣ 5,685 ಎಕರೆ (1965-66) ಇದರಲ್ಲಿ ಕೆರೆಯ ಕೆಳಗಿನ ನೆಲ 5.500 ಎಕರೆ.  185 ಎಕರೆಗಳಿಗೆ ಬಾವಿಗಳಿಂದ  ನೀರು ಒದಗುತ್ತಿತ್ತು.  ತಾಲ್ಲೂಕಿನಲ್ಲಿ 1965-66 ರಲ್ಲಿ ನೀರಾವರಿಗೆ ಒದಗಿದ 153 ಕೆರೆಗಳೂ 320 ಬಾವಿಗಳೂ ಇದ್ದುವು.  ರಾಗಿ, ಬತ್ತ, ನವಣೆ, ಹುರುಳಿ, ಸೇಂಗಾ, ತೊಗರಿ ಇಲ್ಲಿಯ ಮುಖ್ಯ ಬೆಳೆಗಳು. ಕೆಲವು ಕಡೆಗಳಲ್ಲಿ ಹತ್ತಿ ಬೆಳೆಯುತ್ತಾರೆ. ತಿಪಟೂರು ತಾಲ್ಲೂಕು ತೆಂಗಿನ ಬೆಳೆಗೆ ಬಹಳ ಪ್ರಸಿದ್ಧವಾದ್ದು.  ಹೊನ್ನವಳ್ಳಿಯ ಬಳಿ ಬೆಳೆಯುವ ತೆಂಗು ಅತ್ಯುತ್ತಮವಾದ್ದೆಂದು ಪರಿಗಣಿತವಾಗಿದೆ.  ತಾಲ್ಲೂಕಿನ ಅನೇಕ ಕಡೆಗಳಲ್ಲಿ ತೆಂಗಿನ ತೋಟಗಳಿವೆ. ತಾಲ್ಲೂಕಿನಲ್ಲಿ ವ್ಯವಸಾಯದ ಜೊತೆಗೆ ಪಶುಪಾಲನೆಯೂ ಉಂಟು.  ತಿಪಟೂರು, ನೊಣವಿನಕೆರೆ ಮತ್ತು ಬೆಳಿಗೆರೆಯಲ್ಲಿ ಪಶುವೈದ್ಯ ಶಾಲೆಗಳಿವೆ. 

	ಕೊಬ್ಬರಿ ಎಣ್ಣೆ, ಮರಕೊಯ್ಯುವುದು, ಮರಗೆಲಸ, ಕಬ್ಬಿಣ ಕೆಲಸ, ಬೆಂಕಿಕಡ್ಡಿ ಮತ್ತು ಸಾಬೂನು ತಯಾರಿಕೆ- ಇವು ತಾಲ್ಲೂಕಿನ ಮುಖ್ಯ ಕೈಗಾರಿಕೆಗಳು, ರೇಷ್ಮೆ, ಹತ್ತಿ ಮತ್ತು ಉಣ್ಣೆ ಬಟ್ಟೆಗಳನ್ನು ನೇಯುತ್ತಾರೆ.  ನೇಯ್ಗೆಯ ಮತ್ತು ತೆಂಗಿನ ನಾರಿನ ಉದ್ಯಮದ ಸಹಕಾರ ಸಂಘಗಳುಂಟು. 

	ಬೆಂಗಳೂರು-ಅರಸೀಕೆರೆ ಮೀಟರ್ ಗೇಜ್ ರೈಲುಮಾರ್ಗವೂ ಬೆಂಗಳೂರು-ಹೊನ್ನಾವರ ರಾಷ್ರೀಯ ಹೆದ್ದರಿಯೂ ತಿಪಟೂರಿನ ಮೂಲಕ ಹಾದು ಹೋಗುತ್ತವೆ.  ತಿಪಟೂರು ನಗರ ಒಂದು ಸಂದಿಸ್ಥಳ.  ತಿಪಟೂರಿನಿಂದ ನೈಋತ್ಯಾಭಿಮುಖವಾಗಿ ಲಿಂಗದಹಳ್ಳಿಯ ಮೂಲಕ ಹಾಸನಕ್ಕೂ ದಕ್ಷಿಣಾಭಿಮುಖವಾಗಿ ನುಗ್ಗೇಹಳ್ಳಿಯ ಮೂಲಕ ಚನ್ನರಾಯಪಟ್ಟಣಕ್ಕೂ ಆಗ್ನೇಯದ ಕಡೆಗೆ ನೊಣವಿನಕೆರೆಯ ಮೂಲಕ ತುರುವೇಕೆರೆಗೂ ರಸ್ತೆಗಳಿವೆ. ತಿಪಟೂರು-ತುರುವೇಕೆರೆ ರಸ್ತೆ ತುರುವೇಕೆರೆಯಲ್ಲಿ ರಾಷ್ರೀಯ ಹೆದ್ದಾರಿ 150ಎ ರಸ್ತೆಯನ್ನು ಸಂಧಿಸುತ್ತದೆ.  ಕೊನೆಹಳ್ಳಿ ರೈಲುನಿಲ್ದಾಣದಿಂದ ಹೊನ್ನವಳ್ಳಿಗೆ ರಸ್ತೆಯಿದೆ.  ತಾಲ್ಲೂಕಿನ ಬಹುತೇಕ ಎಲ್ಲ ಗ್ರಾಮಗಳಿಗೂ ರಸ್ತೆಗಳಿವೆ. ಇತರ ತಾಲ್ಲೂಕುಗಳಂತೆ ಇಲ್ಲಯೂ  ವಿದ್ಯುತ್ತು, ಅಂಚೆ ತಂತಿ ಸೌಲಭ್ಯಗಳೂ ಶಾಲೆ ಕಾಲೇಜು ಆಸ್ಪತ್ರೆಗಳೂ ಆರೋಗ್ಯ ಕೇಂದ್ರಗಳೂ ಇವೆ. 

	ಈ ತಾಲ್ಲೂಕಿನ ಅಲಬೂರಿನಲ್ಲಿರುವ ಶಿಲಾಶಾಸನಗಳು ಸುಂದರ ಕೆತ್ತನೆಯಿಂದ ಕೂಡಿದವು.  ಹೊನ್ನವಳ್ಳಿಯಲ್ಲಿ ಚೋಳರ ಕಾಲದ್ದೆಂದು ಹೇಳಲಾದ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯವಿದೆ.  ತಿಪಟೂರಿನಿಂದ 5 ಕಿಮೀ.  ದೂರದಲ್ಲಿರುವ ಕೆರೆಗೋಡಿಯಲ್ಲಿರುವ ದೇವಾಲಯ ಶಂಕರೇಶ್ವರನದು.  ದೇವಾಲಯ ಪ್ರದೇಶದಲ್ಲಿ ಕಪ್ಪು ಕಲ್ಲಿನಲ್ಲಿ ಕಡೆದ ಎರಡು ಸಿಂಹಗಳ ವಿಗ್ರಹಗಳುಂಟು.  ದೇವಾಲಯದ ಒಳಗೆ ಬುದ್ಧ, ವಿಘ್ನೇಶ್ವರ, ನಂದಿಯ ವಿಗ್ರಹಗಳಿವೆ.  ಇಲ್ಲಿ ಒಂದು ವೀರಶೈವ ಮಠವಿದೆ.  ತಿಪಟೂರಿನ ಆಗ್ನೇಯಕ್ಕೆ 16 ಕಿಮೀ.  ದೂರದಲ್ಲಿರುವ ನೊಣವಿನಕೆರೆಯಲ್ಲಿರುವ ಪ್ರಾಚೀನ ದೇವಾಲಯಗಳ ಪೈಕಿ ಬೇಟೆರಾಯ, ಗೋಪಾಲಕೃಷ್ಣ, ಶಾಂತೇಶ್ವರ, ನೊಣಬೇಶ್ವರ, ಚಂದೇಶ್ವರ, ಕಲ್ಲೇಶ್ವರ ಮತ್ತು ಗೌರೀಶ್ವರ ದೇವಾಲಯಗಳು ಮುಖ್ಯವಾದವು.  ತಿಪಟೂರಿನ ದಕ್ಷಿಣಕ್ಕೆ 5 ಕಿಮೀ.  ದೂರದಲ್ಲಿರುವ ರಂಗಪುರದಲ್ಲಿರುವ ರಂಗನಾಥ ದೇವಾಲಯ 250 ವರ್ಷಗಳಷ್ಟು ಹಿಂದಿನದು.  ವಿಘ್ನಸಂತೆಯಲ್ಲಿ ಹೊಯ್ಸಳ ಶೈಲಿಯ ಲಕ್ಷ್ಮೀನರಸಿಂಹ ದೇವಾಲಯವಿದೆ.  ಇದು 1286ರಲ್ಲಿ ಹೊಯ್ಸಳ ದೊರೆ 3 ನೆಯ ನರಸಿಂಹನ ಕಾಲದಲ್ಲಿ ಕಟ್ಟಿದ್ದೆಂದು ಹೇಳಲಾಗಿದೆ.  ಇಲ್ಲಿ ಬಾಲಲಿಂಗೇಶ್ವರ ಮತ್ತು ಬನಶಂಕರಿ ದೇವಾಲಯಗಳೂ ಇವೆ. 

	ತಿಪಟೂರು ಉಪವಿಭಾಗದಲ್ಲಿ ತಿಪಟೂರು ಅಲ್ಲದೆ ಚಿಕ್ಕನಾಯಕನಹಳ್ಳಿ (ನೋಡಿ- ಚಿಕ್ಕನಾಯಕನಹಳ್ಳಿ) ಮತ್ತು ತುರುವೇಕೆರೆ (ನೋಡಿ- ತುರುವೇಕೆರೆ) ತಾಲ್ಲೂಕುಗಳಿವೆ.  ಉಪವಿಭಾಗದ ಒಟ್ಟು ವಿಸ್ತೀರ್ಣ 2,684.6 ಚ.ಕಿಮೀ. ಜನಸಂಖ್ಯೆ 4,12,081 (1971).   

  	ತಿಪಟೂರು ನಗರ ತುಮಕೂರಿಗೆ ಪಶ್ಚಿಮದಲ್ಲಿ 73.6ಕಿಮೀ. ದೂರದಲ್ಲಿ, ಉ.ಅ.13o 15' ಮತ್ತು 
ಪೂ.ರೇ, 76o32 ' ಮೇಲೆ, ಬೆಂಗಳೂರು - ಅರಸೀಕೆರೆ ರೈಲುಮಾರ್ಗದಲ್ಲಿ, ಸಮುದ್ರಮಟ್ಟದಿಂದ 2,783 ಅಡಿ ಎತ್ತರದಲ್ಲಿ ಇದೆ.  ಜನ ಸಂಖ್ಯೆ 22,592 (1971).  ತುಮಕೂರು ಜಿಲ್ಲೆಯಲ್ಲಿ ಇದು ಎರಡನೆಯ ದೊಡ್ಡ ನಗರ.  ಮೊದಲನೆಯದು ತುಮಕೂರು, ಹಲವು ರಸ್ತೆಗಳು ಇಲ್ಲಿ ಸಂಧಿಸುತ್ತವೆ.  ಶ್ರಿ ಕೃಷ್ಣರಾಜೆಂದ್ರ ಮತ್ತು ಗಾಂಧಿನಗರ ಬಡಾವಣೆಗಳಿದ ಕೂಡಿ ಬೆಳೆಯುತ್ತಿರುವ ತಿಪಟೂರು ಒಂದು ಮುಖ್ಯ ವ್ಯಾಪಾರಸ್ಥಳ.  ತೆಂಗು ಮತ್ತು ಕೊಬ್ಬರಿ ಇಲ್ಲಿ ಮಾರಾಟವಾಗುವ ಮುಖ್ಯ ಸರಕುಗಳು.  ಮುಂಬಯಿ, ದೆಹಲಿ, ಕಾನ್ಪುರ, ಮುಂತಾದ ದೂರದ ವ್ಯಾಪಾರದ ಕೇಂದ್ರಗಳಿಗೆ ಕೊಬ್ಬರಿ ಮಾರಾಟವಾಗುತ್ತದೆ.  ಪ್ರತಿ ಶನಿವಾರ ಇಲ್ಲಿ ಸಂತೆ ನೆರೆಯುತ್ತದೆ.  ಇಲ್ಲಿ ಒಂದು ನಗರಸಭೆ ಉಂಟು.  ಅನೇಕ ಶಾಲೆಗಳೂ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿದ್ದು ಈಗ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿರುವ ಕಲ್ಪತರು ಕಾಲೇಜೂ ಇವೆ.  ವಿದ್ಯುತ್ತು, ಅಂಚೆ, ತಂತಿ, ದೂರವಾಣಿ, ಸಾರ್ವಜನಿಕ ಆಸ್ಪತ್ರೆ, ಪಶುವೈದ್ಯಶಾಲೆ ಮುಂತಾದ ಸೌಲಭ್ಯಗಳುಂಟು.  ನಗರಕ್ಕೆ ಸುರಕ್ಷಿತ ನೀರಿನ ಸರಬರಾಜಾಗುತ್ತದೆ.  ಕೊಬ್ಬರಿ ಎಣ್ಣೆಯ ಮತ್ತು ಮರ ಕೊಯ್ಯುವ ಕಾರ್ಖಾನೆಗಳಿವೆ.  ವಾಣಿಜ್ಯ ಬ್ಯಾಂಕುಗಳುಂಟು.  ಇಲ್ಲಿರುವ ದೇವಾಲಯಗಳಲ್ಲಿ ಕಲ್ಲೇಶ್ವರ, ತಿಪಟೂರಮ್ಮ, ಆಂಜನೇಯಸ್ವಾಮಿ, ಮಲ್ಲಿಕಾರ್ಜುನ ಕಾಶಿವಿಶ್ವೇಶ್ವರ ಮತ್ತು ಕನ್ಯಕಾಪರಮೇಶ್ವರಿ ದೇವಾಲಯಗಳು ಪ್ರಮುಖವಾದವು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ